ಅಭಿಜಿತ್ 1
	
1979-. ಅರ್ಜುನ ಪ್ರಶಸ್ತಿ ವಿಜೇತ, ಈಜುಗಾರ. 1979 ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಜಯತೀರ್ಥರಾವ್. ಚಿಕ್ಕಂದಿನಿಂದಲೂ ತಂದೆಯವರ ಪ್ರೋತ್ಸಾಹದೊಂದಿಗೆ ಈಜಿಗೆ ಆಕರ್ಷಿತರಾಗಿ ಏಳನೆಯ ವರ್ಷದಲ್ಲೇ ಈಜಿಗೆ ಇಳಿದರು. ಬೆಂಗಳೂರಿನ ಜೈನ್ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಅನಂತರ ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ ಶಿಕ್ಷಣದ ಅಡಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಾರಂಭದ ದಿನಗಳಲ್ಲಿ ವಾಟರ್ ಪೋಲೋ ತಂಡದ ಸದಸ್ಯರಾಗಿ ನೀರಿಗಿಳಿದ ಇವರು ಅನಂತರ ಈಜನ್ನೇ ಕ್ರೀಡೆಯನ್ನಾಗಿಸಿಕೊಂಡರು. 1993-94ರ ಅಂತರಶಾಲಾ ಪಂದ್ಯಾವಳಿಯಲ್ಲಿ 5 ಪದಕಗಳನ್ನು ಪಡೆದರು. ತರಬೇತುದಾರರ ಸಹಾಯದೊಂದಿಗೆ ಅದೇವರ್ಷ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು. ಇವರು ಒಟ್ಟು 12 ಬಾರಿ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ 12 ನೂತನ ದಾಖಲೆಗಳೊಂದಿಗೆ 27 ಚಿನ್ನ, 10 ಬೆಳ್ಳಿ, 7 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಶಾಲಾ ರಾಷ್ಟ್ರೀಯ ಪಂದ್ಯಾವಳಿ, ಕಿರಿಯ ರಾಷ್ಟ್ರೀಯ ಪಂದ್ಯಾವಳಿ, ರಾಷ್ಟ್ರೀಯ ಪಂದ್ಯಾವಳಿಗಳು ಮುಂತಾದ 50ಕ್ಕೂ ಹೆಚ್ಚು ಪಂದ್ಯಾವಳಿಗಳಲ್ಲಿ ಭಾಗವಹಿಸಿ 260 ಚಿನ್ನದ ಪದಕಗಳನ್ನೂ 80ಕ್ಕೂ ಹೆಚ್ಚು ಬೆಳ್ಳಿಯ ಪದಕಗಳನ್ನೂ 70ಕ್ಕೂ ಹೆಚ್ಚು ಕಂಚಿನ ಪದಕಗಳನ್ನೂ ಗಳಿಸಿದ್ದಾರೆ. 
	
ಇವರು ಭಾಗವಹಿಸಿ ವಿಜೇತರಾಗಿ ಪದಕ ಪಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳೆಂದರೆ ನವದೆಹಲಿಯಲ್ಲಿ 1994ರಲ್ಲಿ ನಡೆದ ಏಷ್ಯ ಪೆಸಿಫಿಕ್ ಏಜ್ ಗ್ರೂಪ್ ಈಜುಗಾರರ ಚಾಂಪಿಯನ್‍ಷಿಪ್ (3 ಬೆಳ್ಳಿ ಪದಕಗಳು) 1995ರಲ್ಲಿ ಢಾಕಾದಲ್ಲಿ ನಡೆದ 11ನೆಯ ದಕ್ಷಿಣ ಏಷ್ಯನ್ ಫೆಡರೇಷನ್ ಈಜುಗಾರಿಕೆ ಚಾಂಪಿಯನ್‍ಷಿಪ್ (4 ಚಿನ್ನ, 2 ಬೆಳ್ಳಿ ಪದಕಗಳು), 1995ರಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯಾ ಪೆಸಿಪಿsಕ್ ಈಜುಗಾರಿಕೆ ಚಾಂಪಿಯನ್‍ಷಿಪ್ (1 ಚಿನ್ನ ಹಾಗೂ 1 ಬೆಳ್ಳಿ ಪದಕ), 1995ರಲ್ಲಿ ಚೆನ್ನೈನಲ್ಲಿ ನಡೆದ 7ನೆಯ ಸೌತ್ ಏಷ್ಯನ್ ಫೆಡರೇಷನ್ ಕ್ರೀಡೆಗಳಲ್ಲಿ 7 ಚಿನ್ನದ ಪದಕಗಳೊಂದಿಗೆ 6 ನೂತನ ದಾಖಲೆಗಳನ್ನು ಮಾಡಿದ್ದು ಇವರ ಅತ್ಯುತ್ತಮ ಸಾಧನೆ. 1990ರಲ್ಲಿ ಟೆಹರಾನ್‍ನಲ್ಲಿ ನಡೆದ 13ನೆಯ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ 10 ಚಿನ್ನ ಹಾಗೂ 7 ಬೆಳ್ಳಿ ಪದಕಗಳನ್ನೂ 1999ರಲ್ಲಿ ಸ್ವೀಡನ್‍ನಲ್ಲಿ ನಡೆದ ವಿಶ್ವಪೊಲೀಸ್ ಪಂದ್ಯವೊಂದರಲ್ಲಿ 2 ಚಿನ್ನ ಹಾಗೂ 3 ಕಂಚಿನ ಪದಕಗಳನ್ನೂ ಸಂಪಾದಿಸಿದರು.
	
1994ರಲ್ಲಿ ಗಡಿಭದ್ರತಾ ಪಡೆಯ ನಿರೀಕ್ಷಕರಾಗಿ (ಇನ್ಸ್‍ಪೆಕ್ಟರ್) ನೇಮಕಗೊಂಡ ಇವರು 2002ರಿಂದ ಬೆಂಗಳೂರಿನ ಇನ್‍ಫೋಸಿಸ್ ಸಂಸ್ಥೆಯಲ್ಲಿ ಈಜು ತರಬೇತುದಾರರಾಗಿ ಅನೇಕ ಯುವ ಪ್ರತಿಭೆಗಳನ್ನು ರಾಷ್ಟ್ರಕ್ಕೆ ಪರಿಚಯಿಸಿದ್ದಾರೆ.
	
ಇವರಿಗೆ ಕರ್ನಾಟಕ ರಾಜ್ಯದ ಏಕಲವ್ಯ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಪ್ರಶಸ್ತಿ (2000), ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕೆಂಪೇಗೌಡ ಪ್ರಶಸ್ತಿ ದೊರೆತಿವೆ. ಭಾರತ ಸರ್ಕಾರ ಇವರಿಗೆ ಅರ್ಜುನ ಪ್ರಶಸ್ತಿ (2000) ನೀಡಿ ಗೌರವಿಸಿದೆ.	   									
(ಎಸ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ